ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ಕಣ್ಮನ ತಣಿಸಿದ ನಾಡ ಚಾವಡಿ ಬಳಗದ ಕುಶಲವ ಯಕ್ಷಗಾನ ಪ್ರದರ್ಶನ

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಶನಿವಾರ, ನವ೦ಬರ್ 8 , 2014
ಸಾಗರ ಸಮೀಪದ ಹೆಗ್ಗೋಡಿನ ಗ್ರಾಮ ಚಾವಡಿ ಬಳಗದವರು ಉಡುಪಿ ರಾಜಾಂಗಣದಲ್ಲಿ ನ 6ರಂದು ಪ್ರದರ್ಶಿಸಿಸಿದ ವಿನೂತನ ಪ್ರಯೋಗ ರಾಮೇಶ್ವಮೇಧದ ಕೊನೆಯ ಬಾಗ ಕುಶಲವರ ಕಾಳಗ ಹಲವಾರು ವಿಶಿಷ್ಟತೆ ಮತ್ತು ವಿಶೇಷತೆಗಳಿಂದ ಜನಮೆಚ್ಚುಗೆಗೆ ಪಾತ್ರವಾಯಿತು. ಶಾಲಾ ಕಾಲೇಜು ಕನ್ಯಾಮಣಿಗಳೇ ಹೆಚ್ಚು ಪಾತ್ರಗಳನ್ನು ನಿರ್ವಹಿಸಿ ಯಾವುದೇ ವೃತ್ತಿ ಕಲಾವಿದರಿಗಿಂತಲೂ ಕಡಿಮೆ ಇಲ್ಲ ಎಂದು ತೋರಿಸಿಕೊಟ್ಟರು.

ಕಲೆ ಜಾತಿ ಧರ್ಮದ ಎಲ್ಲೆ ಮೀರಿದ್ದು ಎಂಬುದಕ್ಕೆ ಮುಸ್ಲೀಮ್ ಮತ್ತು ಕ್ರೈಸ ಧರ್ಮದ ಕಲಾವಿದೆಯರ ಭಾಗವಹಿಸುವಿಕೆಯಲ್ಲಿ ಇಲ್ಲಿ ಎದ್ದು ಕಾಣುತಿತ್ತು. ಸಾಗರದಲ್ಲಿ ದ್ವಿತೀಯ ಬಿ. ಕಾಂ ಓದುತ್ತಿರುವ ಕು. ಸುಹಾನ ಮುನೀರ್ ಎನ್ನುವ ಮುಸ್ಲೀಂ ಬಾಲಕಿ ಪ್ರಧಾನ ಪಾತ್ರವೊಂದನ್ನು ನಿರ್ವಸಿದ ರೀತಿ ಅಚ್ಚರಿ ಮೂಡಿಸಿತ್ತು. ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಪಾತ್ರಗಳನ್ನು ನಿರ್ವಹಿಸಿ ಪ್ರೇಕ್ಷಕರ ಶಹಬ್ಬಾಸ್ ಗಿರಿ ಗಿಟ್ಟಿಸಿಕೊಂಡರು ಎನ್ನುವಲ್ಲಿ ನೆರೆದ ಪ್ರೇಕ್ಷಕರ ಕರತಾಡನವೇ ಸಾಕ್ಷಿ. ಸಮರ್ಥವಾಗಿ ನಿರ್ದೇಶನ ನೀಡಿದ ಭಾಗವತ ಮತ್ತು ವಿನ್ಯಾಸಗಾರ ಪ್ರಶಾಂತ್ ಮದ್ಯಸ್ಥ ಹೊಸೂರು ಇವರ ಸಮರ್ಥ ನಿರ್ದೇಶನ ಪ್ರದರ್ಶನದುದ್ದಕ್ಕೂ ಎದ್ದು ಕಾಣುತಿತ್ತು.

“ ಶತ್ರುಘ್ನ ಸೇನೆಗಳ ಸೂತ್ರವನು ದರಿಸುತ್ತಾ. . . ” ಎಂಬಲ್ಲಿಂದ ಪ್ರಾರಂಭವಾದ ಪ್ರಸಂಗದಲ್ಲಿ ಶತ್ರುಘ್ನನಾಗಿ ಚಂದ್ರಹಾಸ ಗೌಡರು ಅಬ್ಬರದ ಪ್ರವೇಶ ಮತ್ತು ಪೂರ್ವ ಪೀಠಿಕೆಯನ್ನು ಚನ್ನಾಗಿಯೇ ನಿರ್ವಹಿಸಿದರು. ಚಂದ್ರಕೇತುವಾಗಿ ಕು. ಸುಹಾನ ಮುನೀರ್ ಮತ್ತು ಪುಷ್ಕಳನಾಗಿ ದಿವ್ಯಾ ನಾಗರಾಜ ಗೌಡರು ಸ್ವರವೊಂದನ್ನುಳಿದು ಉಳಿದೆಲ್ಲಾ ಅಂಗಗಳಲ್ಲಿ ಗಂಡಸರಂತೆಯೇ ಕಾಣಿಸಿದರು.

ಯುದ್ದ ಸನ್ನಿವೇಷದಲ್ಲಿ ಕು ಸುಹಾನ ಪ್ರದರ್ಶಿಸಿಸಿದ ಕ್ಲಿಷ್ಟಕರವಾರ ನಿಧಾನ ರೂಪಕತಾಳದ ಹೆಜ್ಜೆ ವಿಶೇಷವಾಗಿ ಗಮನ ಸೆಳೆಯಿತು. ವಿಶೇಷ ಗಮನಸೆಳೆದ ಮಾಣಿಗಳ ಪಾತ್ರದಲ್ಲಿ ರಂಜಿಸಿದ ಬಾಲ ಕಲಾವಿದರಾದ ಮಾ. ವಿವೇಕ್ ಮತ್ತು ಮಾ. ಸುನಿಲ್. ಸೊಗಸಾದ ಪೀಠಿಕೆಯ ಹಾಸ್ಯ ಚಟಾಕಿ ಪ್ರೇಕ್ಷಕರನ್ನು ರಂಜಿಸಿತು.

ಅತ್ಯಂತ ಚುರಿಕಿನ ರಂಗ ಪ್ರವೇಶ, ಲಾಲಿತ್ಯಪೂರ್ಣವಾದ ಚಾಲು ಕುಣಿತ ಬೇಕಾದಷ್ಟೇ ಮಾತುಗಾರಿಕೆಯಿಂದ ವಿಶೇಷವಾಗಿ ರಂಜಿಸಿದ ಅರ್ಪಿತ ಬಸವರಾಜ್ ರವರ ಲವ ಮತ್ತು ಮದುನಿಕಾ ಯೇಸುಪ್ರಕಾಶ್ ಕುಶನ ಪಾತ್ರಗಳು ಪ್ರೇಕ್ಷಕರನ್ನು ಮಂತ್ರ ಮುಗ್ದಗೊಳಿಸಿತ್ತು. “ ನೋಡಿದಿರೆ ಬಾಲಕರೆ ರೂಡಿಪಾಲನ ಹಯವ” ತ್ರಿವುಡೆ ತಾಳದ ಪದ್ಯದಲ್ಲಿ ಲವ ಪಾತ್ರಧಾರಿ, ``ಶತ್ರುಘ್ನ ಎಂಬವನೇ ನೀನು`` ಭೈರವಿ ಅಷ್ಟತಾಳದ ಪದ್ಯದಲ್ಲಿ ಕುಶ ಪಾತ್ರಧಾರಿ. “ ಲವನೇ ಬಾ ಬಾ ಕುಶನೇ ಬಾ ಬಾ ನೋಡು” ಪದ್ಯದಲ್ಲಿ ಲವಕುಶ ಪಾತ್ರಧಾರಿಗಳು ಜಂಟಿಯಾಗಿ ಅಭಿನಯಿಸಿದ ನೃತ್ಯ ವೈಯುದ್ಯ ಪ್ರೇಕ್ಷಕರನ್ನು ಮಂತ್ರ ಮುಗ್ದಗೊಳಿಸಿತ್ತು. ಈ ಇಬ್ಬರು ಬಾಲಕಿಯರಿಂದ ಹವ್ಯಾಸಿ ರಂಗಭೂಮಿ ಬಹಳಷ್ಟನ್ನು ನಿರೀಕ್ಷಿಸುತ್ತದೆ.

ಶ್ರುತಿಗೆ ಸೇರುವ ಸ್ವರವೊಂದಿದ್ದಿದರೆ ಉಳಿದಲ್ಲಿ ಯಾವುದೇ ವ್ರತಿ ಕಲಾವಿದರಿಗೂ ಕಡಿಮೆ ಅನಿಸಲಿಲ್ಲ. ಮಹಿಳೆಯರ ಸ್ವರ ಯಕ್ಷಗಾನ ರಂಗಭೂಮಿಗೆ ಹೊಂದಿಕೊಳ್ಳುವಲ್ಲಿ ಸ್ವಲ್ಪ ಸೋಲುತ್ತದೆ. ಇದು ಎಲ್ಲಾ ಮಹಿಳಾ ಕಲಾವಿದೆಯರಿಗೆ ಹೊಂದಿಕೆಯಾಗುವ ಮಾತು. ಪ್ರೇಕ್ಷಕರು ಮಹಿಳೆಯರ ಸ್ವರವನ್ನು ಯಕ್ಷಗಾನ ರಂಗಭೂಮಿಗೆ ಒಪ್ಪಿಕೊಂಡಲ್ಲಿ ಮಹಿಳಾ ಯಕ್ಷಗಾನವನ್ನು ಪ್ರಾಮಾಣಿಕವಾಗಿ ಒಪ್ಪ ಬಹುದಾಗಿದೆ.

ಶ್ರೀರಾಮನಾಗಿ ಅನಿವಾರ್ಯವಾಗಿ ಗುರನಂದನ ಹೊಸೂರ್ ಪ್ರವೇಶದಲ್ಲಿ ಹಾಗೂ ರಂಗ ಚಲನೆಯಲ್ಲಿ ಕೆರೆಮನೆ ಶಂಭು ಹೆಗಡೆಯವರನ್ನು ನೆನಪಿಸಿ ಒಳ್ಲೆಯ ಭಾವಾಭಿನಯವನ್ನು ತೋರಿಸಿದರೂ ಅತ್ಯುತ್ತಮ ಸಾಹಿತ್ಯ ಇರುವ ಜಂಪೆ ತಾಳದ “ಚಲುವರನು ನೋಡಿದರೆ ಒಲವು ಮೈದೋರುತಿದೆ” ಅಭಿನಯದ ಪುನರಾವರ್ತನೆ ತುಸು ಹೆಚ್ಚಾಯಿತು ಅನಿಸುತ್ತದೆ. ಸಾತ್ವಿಕ ಪಾತ್ರವಾದ ರಾಮನಿಗೆ ಕೆಂಪು ದಗಲೆ ಎಷ್ಟು ಅರ್ಥಪೂರ್ಣವೋ ತಿಳಿಯಲಿಲ್ಲ. ಉಳಿದಂತೆ ಪ್ರಸಂಗದ ಪ್ರಧಾನ ಪಾತ್ರವಾದ ರಾಮನ ಚಿತ್ರಣವನ್ನು ಸಮಗ್ರವಾಗಿ ಚಿತ್ರಿಸುವಲ್ಲಿ ರಾಮ ಪಾತ್ರಧಾರಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಉಳಿದಂತೆ ಸೀತೆಯಾಗಿ ಗುರು ಭಟ್, ವಾಲ್ಮೀಕಿಯಾಗಿ ಗುರುಮೂರ್ತಿ ಬಾಗವಹಿಸಿದ್ದರು. ಬಾಲಗೋಪಾಲರಾಗಿ ರಂಜಿಸಿದ ಕು. ಮೋನಿಕಾ, ಮತ್ತು ಮಾ ಮೋಹಿತ್ ಪ್ರದರ್ಶನದ ಒಟ್ಟಂದಕ್ಕೆ ಪೂರಕವಾದರು.

ಪ್ರದರ್ಶನದ ಯಶಸ್ಸಿಗೆ ಹಿಮ್ಮೇಳದ ಕೊಡುಗೆ ಅಪಾರವಾಗಿದೆ. ತುಂಬು ಶಾರೀರದ ಸುಶ್ರಾಯ ಕಂಠಸಿರಿಯಲ್ಲಿ ಎಮ್. ಎ. ಹೆಗಡೆಯವರು ರಚಿಸಿದ ಸಾಹಿತ್ಯ ಛಂದಸ್ಸಿನ ಪದ್ಯಗಳನ್ನು ಸಾಹಿತ್ಯ ಕೆಡಿಸದೆ ಹಳೆಯ ಮತ್ತು ಹೊಸ ರಾಗಗಳ ಹದವಾದ ಮಿಶ್ರಣದಲ್ಲಿ ಭಾಗವತರಾಗಿ ಶ್ರೀ ಪ್ರಶಾಂತ ಮದ್ಯಸ್ಥರು ಗಮನ ಸೆಳೆದರು. ಹಿಂದೋಳ, ಕಾಂಭೋದಿ, ಕಲ್ಯಾಣಿ ಸಾವೇರಿ, ಮೋಹನ ಮುಂತಾದ ಹಳೆಯ ರಾಗವಲ್ಲದೆ ಭೀಮ್ ಪಲಾಸ್ ರಾಗದಲ್ಲಿ ಭಾವಪೂರ್ಣವಾಗಿ ಹಾಡಿದ “ನೋಡಿದನು ಶತ್ರುಘ್ನ ಬಾಲಕನ ರೂಪವನು”, ಭಾಮಿನಿ ಪದ್ಯ ಮತ್ತು ವಾಸಂತಿ ರಾಗದಲ್ಲಿ ಹಾಡಿದ “ಬಾಲನಿಗೇತಕೆ ಬಂದಿತೋ”, ರೂಪಕತಾಳದ ಪದ್ಯ ಕರ್ಣಾನಂದ ನೀಡಿತು. ರಾಮನು ಕುಶಲವರನ್ನು ನೋಡಿದಾರ ಬರುವ “ ಚಲುವರನು ನೋಡಿದರೆ ಒಲವು ಮೈದೋರುತ್ತದೆ” ಪದ್ಯವನ್ನು ಅಷ್ಟು ದೀರ್ಘಕಾಲ ಹಾಡುವುದು ರಾಮನಂತ ಧೀರೋದ್ದಾತ್ತ ಪಾತ್ರಕ್ಕೆ ಎಷ್ಟು ಸಮಂಜಸವೋ ತಿಳಿಯದು.

ಕೋಟ ಶಿವಾನಂದ ಶರತ್, ನಾಗರಾಜ ಉತ್ತಮ ಸಹಕಾರ ನೀಡಿದರು. ಒಟ್ಟಾರೆಯಾಗಿ ಬಾಲಕಿಯರು ಬಾಲಕರು ಮಹಿಳೆಯರಿಂದ ಒಟ್ತು ಪ್ರಯತ್ನದಿಂದ ಮೂಡಿಬಂದ ಜನಮೆಚ್ಚುಗೆಯ ಅತ್ಯುತ್ತಮ ವಿನೂತನ ಪ್ರಯೋಗ ಎಂಬುದನ್ನು ನಾಡ ಚಾವಡಿಯವರು ಅರ್ಪಿಸಿದ ಈ ಕಾರ್ಯಕ್ರಮದ ಬಗ್ಗೆ ಪ್ರಾಮಾಣಿಕವಾಗಿ ಒಪ್ಪಬಹುದು.


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
prakash kakal(11/10/2014)
ನಾನೂ ೀ ಈ ಮೂವರು ಹುಡುಗಿಯರ ಕುಣಿತದ ಬಗ್ಗೆ ಕೇಳಿದ್ದೆ. ಈ ಲವ-ಕುಶ ಯಕ್ಷಗಾನ ನಮ್ಮೂರಿನ ಸಾರ್ವಜನಿಕ ಗಣೆಶದಲ್ಲಿ ಪ್ರದಶಿತವಾಗಿತ್ತು. ಇದನ್ನು ನೋಡುವ 15 ದಿನ ಮೊದಲುನಾನು ಬೆಂಗಳೂರಿನ ಗೌರವ ನಗರದಲ್ಲಿ ಕುಮಾರಿ ಅರ್ಪಿತ ಹೆಗಡೆ ಮತ್ತು ಇನ್ನೊಬ್ಬಳು ( ಮಹಿಳೆ ಶಾಸ್ತ್ರಿ ) ಅಭಿನಯಿಸಿದ ರಾಜಾರುದ್ರಕೋಪ ನೋಡಿದ್ದೆ. . . .ನಮ್ಮೂರಿನ ಈ ಮೂವರು ಹುಡುಗಿಯರು ಬೆರಳೆಣಿಕೆಯ ಪ್ರದರ್ಶನ ಕೊಟ್ಟರೂ ಅದ್ಬುತವಾಗಿ ಮಾಡುತ್ತಾರೆ .....ನೀನಾಸಂ ನಾಟಕದಲ್ಲೂ ಅಭಿನಯಿಸುವ ಇವರು ನಮ್ಮೂರಿನ ಹೆಮ್ಮೆ.




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ